ಸಿರ್ಸಿ ಆಸ್ಪತ್ರೆಯಲ್ಲಿ ವಯಸ್ಸಾದ ಕೋವಿಡ್ ರೋಗಿಯ ತಲೆಗೆ ವೈದ್ಯರು ಹೊಡೆದದ್ದು ನಿಜವೇ?: ಫ್ಯಾಕ್ಟ್ ಚೆಕ್ ವರದಿ

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ ಕ್ಲಿಪ್ ಒಂದು ಪ್ರಸಾರವಾಗುತ್ತಿರುವುದನ್ನು ಗಮನಿಸಲಾಗಿದ್ದು, ಅದರಲ್ಲಿ ಸಿರ್ಸಿ ಸರ್ಕಾರಿ ಆಸ್ಪತ್ರೆಯ (ಉತ್ತರ ಕನ್ನಡ ಜಿಲ್ಲೆ) ವೈದ್ಯರು ವಯಸ್ಸಾದ ಕೋವಿಡ್ ರೋಗಿಯನ್ನು ತಲೆಗೆ ಹೊಡೆದು ಕೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕನ್ನಡ ಭಾಷೆಯ ಹಿನ್ನೆಲೆ ಧ್ವನಿಯಲ್ಲಿ “ನನ್ನ ತಂದೆಯನ್ನು ತಲೆಗೆ ಹೊಡೆದು ಕೊಲ್ಲಲಾಗಿದೆ, ಈ ಪಿಪಿಇ ಕಿಟ್‌ನಲ್ಲಿ ರಕ್ತ ನೋಡಿ. ಕರೋನಾ ಸಾವಿಗೆ ಕಾರಣವಾಗಿದ್ದರೆ, ತಲೆಯಲ್ಲಿ ರಕ್ತ ಹೇಗೆ ಬರುತ್ತದೆ? ” ಎಂದು ಮೃತರ ಶವಸಂಸ್ಕಾರದ ವೇಳೆಯಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಾ ಮಾತನಾಡಿರುವುದು ಕೇಳಿಬಂದಿರುತ್ತದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳು:

ನಿಜವಾದ ಸಂಗತಿಗಳು:

ಪರಿಶೀಲಿಸಲಾಗಿ ಸಿರ್ಸಿ ಜನರಲ್ ಆಸ್ಪತ್ರೆಯಲ್ಲಿ ವ್ಯಕ್ತಿಯ ಸಾವು ಸಂಭವಿಸಿದೆ ಎಂಬುದು ಸತ್ಯವಾಗಿರುತ್ತದೆ. ಆದರೆ ಅದು ವಿಡಿಯೋದಲ್ಲಿ ಆರೋಪಿಸಿರುವಂತೆ ಯಾವುದೇ ಹಲ್ಲೆಯಿಂದಾಗಿಲ್ಲ. ಈ ವಿಷಯದ ಬಗ್ಗೆ ಸಿರ್ಸಿ ಜನರಲ್ ಆಸ್ಪತ್ರೆ ಈಗಾಗಲೇ ಸ್ಪಷ್ಟೀಕರಣವನ್ನು ಈ ಕೆಳಕಂಡಂತೆ ನೀಡಿರುತ್ತಾರೆ.

ಸಿರ್ಸಿಯ ಪಂಡಿತ್ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಗಜಾನನ್ ಭಟ್ ಅವರು ಮಾಧ್ಯಮಗಳಿಗೆ ಮತ್ತು ಇತರ ಮೂಲಗಳಿಗೆ ನೀಡಿರುವ ಮಾಹಿತಿ ಅದೇನೆಂದರೆ ? “ವೈದ್ಯರು ಯಾರ ಮೇಲೂ ಹಲ್ಲೆಯನ್ನು ನಡೆಸಿರುವುದಿಲ್ಲ ಮತ್ತು ಅವರ ತಲೆಯಿಂದ ರಕ್ತಸ್ರಾವವಾಗಿರುವುದು ಆ ಕಾರಣಕ್ಕಾಗಿ ಅಲ್ಲ. ಈ ಘಟನೆಯು ಮಂಗಳವಾರ ಮಧ್ಯಾಹ್ನ (27/04/2021) ಸಂಭವಿಸಿದೆ. ನಾನು ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರಲಿಲ್ಲ.ಆದರೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಿಯೋಜಿಸಲಾದ ಇತರ ವೈದ್ಯರು ಇದ್ದರು. ಜ್ವರ ಚಿಕಿತ್ಸಾಲಯಕ್ಕೆ ಬಂದ ಸಿರ್ಸಿ ತಾಲ್ಲೂಕಿನ ಅಮಿನಳ್ಳಿ ಗ್ರಾಮ ಸಿರಸಿ ತಾಲ್ಲೂಕಿಗೆ ಸೇರಿದ ಸುಮಾರು 70-72 ವರ್ಷ ವಯಸ್ಸಿನ ವ್ಯಕ್ತಿ 70% ಸ್ಯಾಚುರೇಶನ್ ಹೊಂದಿದ್ದು ನಂತರ ಅವರಿಗೆ ತ್ವರಿತ ಆಂಟಿಜೆನ್ ಪರೀಕ್ಷೆಯನ್ನು ನಡೆಸಿದ್ದರಿಂದ ಕೋವಿಡ್ ಸೋಂಕು ಹೊಂದಿರುವುದು ದೃಡಪಟ್ಟಿತು. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯ ವಾರ್ಡ್‌ಗೆ ದಾಖಲಿಸಲಾಯಿತು”.

“ಅವರಿಗೆ ರೆಮ್ಡೆಸಿವಿರ್ ಚುಚ್ಚುಮದ್ದು ಮತ್ತು ಆಮ್ಲಜನಕವನ್ನು ನೀಡಲಾಯಿತು. ಇದಲ್ಲದೆ, ಕೋವಿಡ್ ಸೋಂಕಿತ ಜನರಿಗೆ ಹೆಪಾರಿನ್ ಚುಚ್ಚುಮದ್ದನ್ನು ಶ್ವಾಸಕೋಶದಲ್ಲಿನ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ನೀಡಲಾಗುತ್ತದೆ. ಇಂಜೆಕ್ಷನ್ ಪಡೆದ ನಂತರ, ಅವರು ಮೂತ್ರ ವಿಸರ್ಜಿಸಲು ಶೌಚಾಲಯಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಅವರು ಏಕಾಏಕಿ ಹಿಂಬದಿಗೆ ಕುಸಿದುಬಿದ್ದರು. ಕರ್ತವ್ಯದಲ್ಲಿದ್ದ ಸಿಬ್ಬಂದಿ ತಕ್ಷಣ ಅವನನ್ನು ಎತ್ತಿಕೊಂಡು ಅವರಿಗೆ ಚೈತನ್ಯ ನೀಡಲು ಪ್ರಯತ್ನಿಸಿದರು. ಆದರೆ, ಅವರು ಬದುಕುಳಿಯಲಿಲ್ಲ. ಇವರಿಗೆ ಕೋವಿಡ್ ಧೃಡಪಟ್ಟಿದ್ದಕಾರಣ ಇದನ್ನು ಕೋವಿಡ್ ಸಾವು ಎಂದು ಪರಿಗಣಿಸಿ ಶವವನ್ನು ಮೃತ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆದರೆ ಮೃತ ವೃದ್ಧ ವ್ಯಕ್ತಿಯು ಮೂತ್ರ ವಿಸರ್ಜಿಸುವಾಗ ಕೆಳಗೆ ಬಿದ್ದಾಗ ತಲೆಗೆ ಸಣ್ಣ ಗಾಯವಾಗಿತ್ತು. ದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸುವಾಗ, ಹೆಪಾರಿನ್ ಚುಚ್ಚುಮದ್ದಿನ ಪರಿಣಾಮದಿಂದಾಗಿ ತಲೆಯಿಂದ ರಕ್ತ ಹರಿದಿರುತ್ತದೆ ಮತ್ತು ಇದಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ. ಹೆಪಾರಿನ್ ಚುಚ್ಚುಮದ್ದು 6 ಗಂಟೆಗಳವರೆಗೆ ತನ್ನ ಪರಿಣಾಮವನ್ನು ಹೊಂದಿರುತ್ತದೆ. ಆದರೆ, ಅವರ ಸಾವು ಗಾಯದಿಂದ ಆಗಿದ್ದಲ್ಲ ಹೊರತಾಗಿ ಅವರು ಈಗಾಗಲೇ ಕೋವಿಡ್‌ನಿಂದ ಪೀಡಿತರಾಗಿದ್ದರು ಮತ್ತು ಆಸ್ಪತ್ರೆಯಲ್ಲಿ ಅದೇ ಕಾರಣಕ್ಕೆ ಮರಣಿಸಿರುತ್ತಾರೆ”.
ಇದೇ ಸುದ್ದಿ ಸ್ಟೇಟ್‌ನ್ಯೂಸ್ ಎಕ್ಸ್‌ಪ್ರೆಸ್ ಎಂಬ ಸುದ್ದಿ ಪೋರ್ಟಲ್‌ನಲ್ಲೂ ಪ್ರಕಟವಾಗಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ:- http://statenewsexpress.com/head-of-the-elderly-in-the-hospital/

ಆಂತಿಮವಾಗಿ,

ಘಟನೆಯ ನಿಜವಾದ ಕಾರಣವನ್ನು ತಿಳಿಯದೆ, ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಈ ವಿಡಿಯೊ ತಯಾರಿಸಿದ್ದಾರೆ ಮತ್ತು ನಂತರ ಅದು ವೈದ್ಯರು ತಲೆಯ ಮೇಲೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದು ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿರುತ್ತದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸರಿಯಾದ ಪರಿಶೀಲನೆ ಮಾಡದೇ ಕರೋನಾ ರೋಗ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ಅನಧಿಕೃತ ನಕಲಿ ವೀಡಿಯೊಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

1 Comment

  1. Doctor’s clarification is right.
    Self fall has induced trauma to head which has bled due to heparin which is one of the treatment protocol for covid cases to prevent clotting

Leave a Reply

Your email address will not be published.


*