‘ಕಾಶ್ಮೀರ್ ಫೈಲ್ಸ್’ ಸಿನೆಮಾ ನೋಡಿ ʼಮುಸ್ಲಿಂʼ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ ಎಂಬುದರ ಬಗ್ಗೆ: ಸತ್ಯ ಸಂಗತಿಗಳು

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ವೀಕ್ಷಿಸಿದ ನಂತರ 18 ವರ್ಷದ ಮುಸ್ಲಿಂ ಯುವಕನ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮತ್ತು ವಿವಿಧ ಹ್ಯಾಂಡಲ್ಗಳು ವ್ಯಾಪಕವಾಗಿ ಶೇರ್‌ ಮಾಡಿಕೊಂಡಿರುವುದನ್ನು ಗಮನಿಸಲಾಗಿದೆ.

ಈ ಘಟನೆಯು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು, ಸುಳ್ಳು ಸಂಗತಿಯಾಗಿರುತ್ತದೆ.

ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್ ಚೆಕ್ ತಂಡವು ಈ ಕುರಿತು ಪರಿಶೀಲಿಸಿದ್ದು ನಿಜವಾದ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ.

ಆರೋಪಿಯಾದ (ಹೊನ್ನಪ್ಪ ಬೋವಿ, 30 ವರ್ಷ) ಮತ್ತು ಸಂತ್ರಸ್ತ (ಅಮಾನುಲ್ಲಾ ಇರ್ಫಾನ್ 18 ವರ್ಷ) ಇಬ್ಬರು ನೆರೆಹೊರೆಯವರಾಗಿದ್ದು, ಸಂತ್ರಸ್ತನು ಆರೋಪಿಯ ತಾಯಿಯನ್ನು ನಿರಂತರವಾಗಿ ನಿಂದಿಸುತ್ತಿದ್ದರಿಂದ ಆರೋಪಿಯು ತನ್ನ ಮನೆಯ ಮುಂದೆ ಸಂತ್ರಸ್ತನ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಮೊಕದ್ದಮೆ ದಾಖಲಾದ ನಂತರ ಆರೋಪಿಯನ್ನು ಬಂದಿಸಲಾಗಿರುತ್ತದೆ. ಆರೋಪಿಯು ವಿಚಾರಣೆಯ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಘಟನೆಗೂ ಹಾಗೂ ಕಾಶ್ಮೀರ್ ಫೈಲ್ಸ್ ಚಲನಚಿತ್ರಕ್ಕೂ ಯಾವುದೇ ತರಹದ  ಸಂಬಂಧವಿರುವುದಿಲ್ಲ ಹಾಗೂ ಕೋಮು ವಿಷಯಕ್ಕೂ ಸಂಬಂಧಿಸಿದ್ದಲ್ಲ.

ಸಂತ್ರಸ್ಥನು ಸುರಕ್ಷಿತನಾಗಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಹಳಿಯಾಳ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 59/2022 ಕಲಂ 324, 307, 504 ಐಪಿಸಿ.ಎಫ್ಐಆರ್(FIR) ದಾಖಲಿಸಲಾಗಿದೆ.

ಎಫ್ಐಆರ್(FIR) ಪ್ರತಿಗಳು:

ತೀರ್ಮಾನ:

ಹಲ್ಲೆಯ ಘಟನೆಯು ನಿಜವಾಗಿದ್ದರೂ, ಅದರ ಉದ್ದೇಶವು ಆರೋಪಿಸಿರುವಂತೆ ಕಾಶ್ಮೀರ್ ಫೈಲ್ಸ್ ಚಲನಚಿತ್ರದಿಂದ ಪ್ರೇರಿತವಾಗಿ ನಡೆಸಿದ್ದಲ್ಲ. ಇದು ಕೇವಲ ವೈಯಕ್ತಿಕ ಕಾರಣಗಳಿಂದ ಸಂಭವಿಸಿರುತ್ತದೆ. ಘಟನೆಯನ್ನು ಕೆಲವು ಕಿಡಿಗೇಡಿಗಳು ಕೋಮು ಸೌಹಾರ್ಧ ಹದಗೆಡಿಸಲು ತಿರುಚಲು ಪ್ರಯತ್ನಿಸಿರುವುದು ಕಂಡುಬರುತ್ತದೆ.

ಸತ್ಯತೆ ಪರಿಶೀಲಿಸಲಾಗಿ, ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು ಸುದ್ದಿಯಾಗಿದ್ದು ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಉದ್ದೇಶಪೂರ್ವಕವಾಗಿ ಈ ಮೇಲಿನಂತೆ ಸುಳ್ಳು ಸುದ್ದಿ ಹರಡುವವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡುತ್ತಾ ಸಾರ್ವಜನಿಕರು ಸರಿಯಾಗಿ ಪರಿಶೀಲಿಸದೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬಾರದೆಂದು ಈ ಮೂಲಕ  ಕೋರಲಾಗಿದೆ.

Be the first to comment

Leave a Reply

Your email address will not be published.


*